

ನಮ್ಮ ಬಗ್ಗೆ:
ಆರಂಭಿಕ ಆಶಯ: ಮೂಲತಃ ದೇವದುರ್ಗ ತಾಲೂಕಿನಲ್ಲಿ ಶಿಕ್ಷಣಾಭಿವೃದ್ಧಿ ಸಾಧಿಸುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭಿಸಲ್ಪಟ್ಟ ಶಿಕ್ಷಣ ಸಂಸ್ಥೆ ನಮ್ಮದು.
1986 ರ ನಾಗರ ಪಂಚಮಿಯ ದಿನದಂದು ವಿದ್ಯಾಧಿದೇವತೆ ‘ಶಾರದೆ’ಯ ಭಾವಚಿತ್ರಕ್ಕೆ ಪ್ರಾತಃಸ್ಮರಣೀಯ ‘ಪೂಜ್ಯ ಶ್ರೀ ವೆಂಕಟವರಪ್ಪಯ್ಯ ದೇವರು’ ಇವರ ಅಮೃತ ಹಸ್ತದಿಂದ ಪೂಜೆ ನೆರವೇರಿಸಿ ದಿನಾಂಕ: 01-08-1986 ರಂದು ಲಿಂಗೈಕ್ಯ ಶರಣ ಶ್ರೀ ಜಿ.ವೀರಭದ್ರಪ್ಪ ಸಾಹುರವರ ‘ಹಳೆ ಜಿನ್’(ಬಾಡಿಗೆ ಕಟ್ಟಡ) ದಲ್ಲಿ ವಿದ್ಯುಕ್ತವಾಗಿ 05 ಮಕ್ಕಳೊಂದಿಗೆ ಪಾಠಶಾಲೆಯನ್ನು ಪ್ರಾರಂಭಿಸಲಾಯಿತು.
ವಿದ್ಯಾಸಂಸ್ಥೆಯ ಸಂಕೇತ:
‘ನಂದಿ’(ಬಸವ) ದೇವದುರ್ಗ ಗಾಂಧೀ ವೃತ್ತದಿಂದ ಪೂರ್ವಕ್ಕೆ ನಾಲ್ಕಾರು ಅಂಗಡಿಗಳನ್ನು ದಾಟಿದರೆ ಬರುವ ‘ಬಜಾರ ಬಸವಣ್ಣ’ ದೇವಸ್ಥಾನದ ಗರ್ಭಗುಡಿಯ ಮೂರ್ತಿ ನಂದಿಯನ್ನು ವಿದ್ಯಾಸಂಸ್ಥೆಯು ಸಂಕೇತವಾಗಿ ಆಯ್ದುಕೊಂಡಿದೆ.
ಆದ್ಯತೆಯ ಮೇರೆಗೆ ಕಾರ್ಯಕ್ಷೇತ್ರವನ್ನು ಆಯ್ದುಕೊಂಡ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪ್ರಾರಂಭದಲ್ಲಿ ದೇವದುರ್ಗ ಪಟ್ಟಣ ನಂತರ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾಸಂಸ್ಥೆಯನ್ನು ವಿಸ್ತರಿಸಬೇಕೆಂದು ಮನೋಭಾವನೆ ಹೊಂದಿತ್ತು. ಕಾಲಘಟ್ಟದಲ್ಲಿ ಮೂಡಿಬಂದ ಕಾಠಿಣ್ಯತೆಯನ್ನು ಅರಿತು ಪ್ರಸ್ತುತ ದೇವದುರ್ಗ ಪಟ್ಟಣದಲ್ಲಿ ಮಾತ್ರ ತನ್ನ ಕಾರ್ಯಕ್ಷೇತ್ರವನ್ನು ಹೊಂದಿದೆ.
ಇತರೆ ಮೂಲಭೂತ ಹಾಗೂ ಬೋಧನಾ ಸೌಲಭ್ಯಗಳು:
ವಿದ್ಯಾಸಂಸ್ಥೆಯು ಉತ್ತಮ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು ಸಂಕಲ್ಪ ತಾಳಿದೆ. ಈ ಹಿನ್ನಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ‘ಬೆಂಚ್ ಮತ್ತು ಡೆಸ್ಕ್’ ವ್ಯವಸ್ಥೆ ಕಲ್ಪಿಸಲಾಗಿದ್ದು, ‘ಶಿಶುವಿಹಾರ’ ತರಗತಿಯಲ್ಲಿನ ಮಕ್ಕಳಿಗೆ ‘ನೆಲದ ಮಣಿ’(ಹಲಗೆ) ಜೊತೆಗೆ ‘ಫ್ಯಾನ್’ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಆಟದ ಸಾಮಗ್ರಿಗಳ ವ್ಯವಸ್ಥೆಗೆ ಗ್ರಂಥಾಲಯ, ವಿಜ್ಞಾನ ಬೋಧನೆಗೆ ಬೇಕಾಗುವ ಪ್ರಯೋಗ ಸಾಮಗ್ರಿಗಳು, ನಕಾಶೆಗಳು, ಪರಿಣಾಮಕಾರಿ ಬೋಧನೆಗೆ ಬೇಕಾಗುವ ಕಂಪ್ಯೂಟರ್ ಲ್ಯಾಬ್ ಮತ್ತು ವೀಡಿಯೋ ಪ್ರೊಜೆಕ್ಟರ್ ಗಳು ಅವಶ್ಯಕ ವಸ್ತುಗಳು, ಸಲಕರಣೆಗಳನ್ನು ವಿದ್ಯಾಸಂಸ್ಥೆಯು ಒದಗಿಸಿರುವುದರಿಂದ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ತಾಲೂಕಿನಲ್ಲಿಯೇ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ. ಇದಕ್ಕೆ ಉತ್ತಮ ನಿದರ್ಶನವೆಂದರೆ ಹತ್ತನೇ ತರಗತಿಯ(SSLC) ಫಲಿತಾಂಶ ಹಾಗೂ ಮೇಲಾಧಿಕಾರಿಗಳು ಭೇಟಿ ನೀಡಿದಾಗ ವ್ಯಕ್ತಪಡಿಸಿದ ಪ್ರಶಂಸನೀಯ ನುಡಿಗಳು.
ಶಾಲೆಯ ಒಳಪ್ರವೇಶಿಸಿದರೆ ಕಂಡುಬರುವ ಗೋಡೆ ಬರಹಗಳು, ನಕಾಶೆಗಳು, ನುಡಿಮುತ್ತಿಗಳು, ಪ್ರತಿಯೊಂದು ವರ್ಗ ಕೋಣೆಯೊಳಗೆ ನೇತು ಹಾಕಲ್ಪಟ್ಟ ಮಕ್ಕಳ ಚಟುವಟಿಕೆಗಳಿಂದ ಮೂಡಿಬಂದ, ಪಠ್ಯ ವಿಷಯಕ್ಕೆ ಸಂಬಂಧಿಸಿದ ಚಿತ್ರ ಪಟಗಳು, ಮಕ್ಕಳಲ್ಲಿ ಕಲಿಕೆಯ ಕಡೆಗೆ ಆಸಕ್ತಿ ಮೂಡಿಸುವಲ್ಲಿ ಶಿಕ್ಷಕರು ಹೆಚ್ಚು ಪ್ರಭಾವ ಬೀರಿದ್ದಾರೆ ಎಂಬುದನ್ನು ಸೂಚಿಸುತ್ತದೆ.






